ಕಿಡಿ ಜ್ವಲನ

  ಕಡಿಮೆ ಸಂಪೀಡನ ಪ್ರಮಾಣವುಳ್ಳ (ಕಂಪ್ರೆಶನ್ ರೇಷಿಯೊ) ಎಂಜಿನ್ನುಗಳಲ್ಲಿ; ಉದಾಹರಣೆಗೆ ಅಂತರ್ದಹನ ಎಂಜಿನ್‍ನ ವರ್ತುಲ ನಾಳಿಯಲ್ಲಿ ಅನಿಲ ಮಿಶ್ರಣವನ್ನು ವಿದ್ಯುತ್ ಕಿಡಿಯಿಂದ ಹೊತ್ತಿಸಲು ಪ್ರೇರಕ ಬಾಹ್ಯಕಾರಕ (ಸ್ಪಾರ್ಕ್ ಇಗ್ನಿಷನ್)ಬಳಸುತ್ತಾರೆ. ಇಂಥ ಎಂಜಿನ್ನುಗಳಲ್ಲಿ ಸಂಪೀಡನ ಘಾತದ (ಕಂಪ್ರೆಶನ್ ಸ್ಟ್ರೋಕ್) ಅಂತ್ಯದಲ್ಲಿ ಸಾಕಷ್ಟು ಉಷ್ಣತೆ ಉಂಟಾಗದಿರುವುದರಿಂದ ಇಂಧನ-ಗಾಳಿ ಮಿಶ್ರಣ ತಾನಾಗಿಯೇ ಹೊತ್ತಿಕೊಳ್ಳುವುದಿಲ್ಲ. ಆಗ ಸಿಲಿಂಡರಿನೊಳಗೆ ವಿದ್ಯುತ್ ಕಿಡಿಯನ್ನು ಉಂಟುಮಾಡಿ ಇಂಧನಮಿಶ್ರಣವನ್ನು ಕಿಡಿಬಿರಡೆ (ಸ್ಪಾರ್ಕ್ ಪ್ಲಗ್) ಎಂಬ ತೆಗೆದುಹಾಕಬಹುದಾದ ಸಾಧನವನ್ನು ಸಿಲಿಂಡರಿಗೆ ಜೋಡಿಸಬೇಕು. ಇದರ ಮೂಲಕ ಅಧಿಕ ವೋಲ್ಟೇಜ್ ಇರುವ ವಿದ್ಯುಚ್ಛಕ್ತಿಯನ್ನು ಹರಿಸಿದರೆ ಅದು ಎಲೆಕ್ಟ್ರೋಡುಗಳ ನಡುವಿನ ತೆರಪನ್ನು ದಾಟುವ ಪ್ರಯತ್ನದಲ್ಲಿ ವಿದ್ಯುತ್ ಕಿಡಿಯನ್ನು ಉಂಟುಮಾಡುತ್ತದೆ. ಇದರಿಂದ ಇಂಧನ-ಗಾಳಿ ಮಿಶ್ರಣ ಹೊತ್ತಿಕೊಂಡು ಜ್ವಾಲೆ ಮಿಶ್ರಣದ ಪೂರ್ತಿ ಹರಡಿ ಅಗತ್ಯವಾದ ದಹನವುಂಟಾಗುತ್ತದೆ.

 ಪ್ರೇರಕ ಸುರುಳಿಯ ಜ್ವಲನ (ಇಂಡಕ್ಷನ್ ಕಾಯಿಲ್ ಇಗ್ನಿಷನ್): ಈ ವ್ಯವಸ್ಧಯಲ್ಲಿ ಒಂದೇ ದಿಂಡಿನ ಸುತ್ತಲೂ ಪ್ರಾಥಮಿಕ ಹಾಗೂ ದ್ವಿತೀಯಕ ಸುರುಳಿಗಳಿಂದ ಬಿಗಿಯಲ್ಟಟ್ಟ ಪ್ರೇರಕ ಸುರುಳಿಯೆಂಬ ಭಾಗ ಉಂಟು. ಕಿಡಿಯ ಉತ್ಪಾದನೆಗೆ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ವಿದ್ಯುತ್‍ಕೋಶ ಒದಗಿಸುತ್ತದೆ. ವಿಯೋಜಕ ಬಿಂದುಗಳ (ಬ್ರೇಕರ್ ಪಾಯಿಂಟ್ಸ್) ಸಂಪರ್ಕ ಕೂಡಿಸಿ, ಸ್ವಿಚ್ಚನ್ನು ಹಾಕಿದಾಗ ಮಂಡಲ (ಸಕ್ರ್ಯೂಟ್) ಪೂರ್ಣಗೊಂಡು ವಿದ್ಯುತ್‍ಕೋಶ ಒದಗಿಸುವ ವಿದ್ಯುಚ್ಛಕ್ತಿ ಪ್ರಾಥಮಿಕ ಸುರುಳಿಗಳ ಮತ್ತು ವಿಯೋಜಕ ಬಿಂದುಗಳ ಮೂಲಕ ಹರಿದು ಎಂಜಿನ್ನಿನ ಚೌಕಟ್ಟು ಅಥವಾ ಸಂಪರ್ಕಗಳಿಂದ ಪುನಃ ವಿದ್ಯುತ್‍ಕೋಶಕ್ಕೆ ಹರಿಯುತ್ತದೆ.

 

ಚಿತ್ರ-1

 

ವಿದ್ಯುಚ್ಛಕ್ತಿ ಪ್ರಾಥಮಿಕ ಸುರುಳಿಗಳಲ್ಲಿ ಹರಿದಾಗ ದಿಂಡಿನ ಒಳಗೂ ಸುತ್ತಲೂ ಕಾಂತಕ್ಷೇತ್ರವೊಂದನ್ನು ಪ್ರೇರೇಪಿಸುತ್ತದೆ. ಇದಾದ ತರುವಾಯ ಸೂಕ್ತ ಘಟಕಗಳ ಜೋಡಣೆಯಿಂದ ಎಂಜಿನ್ನಿನ ಚಲನೆಯೇ ವಿಯೋಜಕ ಬಿಂದುಗಳ ಸಂಪರ್ಕವನ್ನು ಕಡಿಯುತ್ತದೆ. ಇದರಿಂದ ವಿದ್ಯುನ್ಮಂಡಲ ತುಂಡಾಗಿ ಇದುವರೆಗೂ ವಿಯೋಜಕ ಬಿಂದುಗಳ ಮೂಲಕ ಹರಿಯುತ್ತಿದ್ದ ವಿದ್ಯುಚ್ಛಕ್ತಿ ಪಥಬದಲಿಸಿ ವಿದ್ಯುತ್ಸಂಗ್ರಾಹಕವನ್ನು (ಎಲೆಕ್ಟ್ರಿಕ್ ಕಂಡೆನ್ಸರ್) ತುಂಬುತ್ತದೆ. ಹೀಗಾಗಿ ಶೀಘ್ರವಾಗಿ ಪ್ರಾಥಮಿಕ ವಿದ್ಯುತ್ತು ಹಾಗೂ ಇದರಿಂದ ಕಾಂತಕ್ಷೇತ್ರ ಕುಸಿಯುತ್ತವೆ. ದಿಂಡಿನ ಕಾಂತಕ್ಷೇತ್ರದ ಈ ರೀತಿಯ ಶೀಘ್ರ ಕುಸಿತ ಅದೇ ದಿಂಡಿಗೆ ಸುತ್ತಿರುವ ದ್ವಿತೀಯಕ ಸುರುಳಿಗಳಲ್ಲಿ ಒಂದು ಅತ್ಯಧಿಕ ವೋಲ್ಟೇಜನ್ನು ಪ್ರೇರೇಪಿಸುತ್ತದೆ. ಈ ವೋಲ್ಟೇಜಿನ ಏರಿಕೆ ದ್ವಿತೀಯಕ ಸುರುಳಿಯಲ್ಲಿರುವ ತಂತಿಯ ಸುತ್ತುಗಳ ಸಂಖ್ಯೆಯನ್ನು ಅವಲಂಬಿಸಿದೆ. ಎಷ್ಟು ವೋಲ್ಟೇಜ್ ಬೇಕೆಂಬುದು ಎಂಜಿನ್ನಿನ ಸಂಪೀಡನ ಒತ್ತಡ, ವೇಗ, ಮಿಶ್ರಣ ಪ್ರಮಾಣ, ಕಿಡಿಬಿರಡೆ ಉಷ್ಣತೆ, ಕಿಡಿಬಿರಡೆ ಎಲೆಕ್ಟ್ರೋಡುಗಳ ನಡುವಿನ ತೆರಪು ಇವನ್ನು ಅವಲಂಬಿಸಿದೆ. ಈ ಅಧಿಕ ವೋಲ್ಟೇಜನ್ನು ಡಿಸ್ಟ್ರಿಬ್ಯೂಟರ್ ಎಂಬ ತಿರುಗಬಲ್ಲ ಸ್ವಿಚ್ವಿನಿಂದ ಸರಿಯಾದ ಕ್ರಮದಲ್ಲಿ ಪ್ರತಿಯೊಂದು ಸಿಲಿಂಡರಿನಲ್ಲಿರುವ ಕಿಡಿಬಿರಡೆಗೆ ಒಯ್ದು, ಈಗಾಗಲೇ ಹೇಳಿರುವಂತೆ, ಕಿಡಿಯನ್ನು ಉಂಟುಮಾಡಬಹುದು. ವಿದ್ಯುತ್ಸಂಗ್ರಾಹಕವನ್ನು ಉಪಯೋಗಿಸದಿದ್ದರೆ ಕಾಂತಕ್ಷೇತ್ರದ ಕುಸಿತದಿಂದುಂಟಾದ ಪ್ರಾಥಮಿಕ ವೋಲ್ಟೇಜ್ ವಿಯೋಜಕ ಬಿಂದುಗಳ ನಡುವೆಯೇ ಕಿಡಿಯನ್ನು ಉಂಟುಮಾಡಿ, ಅವನ್ನು ಸುಟ್ಟು ಬೇಗ ನಾಶಮಾಡುತ್ತದೆ.

 ಜೋಡಿ ಜ್ವಲನ (ಡ್ಯುಅಲ್ ಇಗ್ನಿಷನ್): ಕೆಲವು ಎಂಜಿನ್ನುಗಳಿಗೆ ಒಂದೇ ದಹನ ಕೋಷ್ಠದಲ್ಲಿ ಒಮ್ಮೆಗೇ ಎರಡು ಕಿಡಿಗಳನ್ನು ಉಂಟುಮಾಡುವ ವ್ಯವಸ್ಥೆ ಇರುವುದುಂಟು. ಇದರಿಂದ ಸ್ವಲ್ಪ ಹೆಚ್ಚಾಗಿ ಶಕ್ತಿಯನ್ನು ಪಡೆಯಬಹುದು. ರಕ್ಷಾ ಕವಚವಿರುವ (ಇನ್ಸುಲೇಟೆಡ್) ಎರಡು ಎಲೆಕ್ಟ್ರೋಡುಗಳನ್ನುಳ್ಳ ವಿಶೇಷ ಕಿಡಿಬಿರಡೆಗಳನ್ನು ಶ್ರೇಣಿಯಲ್ಲಿ ಜೋಡಿಸಿದ್ದರೆ ಸಾಮಾನ್ಯ ಜ್ವಲನ ವ್ಯವಸ್ಥೆಯಿಂದಲೇ ಕಿಡಿಯನ್ನು ಪಡೆಯಬಹುದು. ಆದರೆ ಅಧಿಕ ಒತ್ತಡದಲ್ಲಿರುವ ಎರಡು ತೆರಪು ಶ್ರೇಣಿಯಲ್ಲಿ ದಾಟಲು ಅತ್ಯಧಿಕ ವೋಲ್ಟೇಜ್ ಬೇಕು.

 ಕಾಂತ ವಿದ್ಯುತ್ ಜ್ವಲನ: ಸೂಕ್ತ ಜೋಡಣೆಗಳ ನೆರವಿನಿಂದ ಎಂಜಿನ್ನಿನ ದಂಡದಿಂದ (ಷಾಫ್ಟ್) ಚಲನೆಯನ್ನು ಪಡೆದು ಇಚ್ಛಿತ ವೋಲ್ಟೇಜನ್ನು ಉಂಟುಮಾಡುವ ವಿದ್ಯುಜ್ಜನಕದಂತಿರುವ ಸಾಧನ. ಇದರಿಂದ ಈ ವ್ಯವಸ್ಥೆ ಕೆಲಸಮಾಡಲು ವಿದ್ಯುತ್ ಕೋಶದ ಅಗತ್ಯವಿಲ್ಲ. ಇಲ್ಲಿ ಸಹ ಮೆದು ಕಬ್ಬಿಣದ ದಿಂಡನ್ನು ಪ್ರಾಥಮಿಕ ಹಾಗೂ ದ್ವಿತೀಯಕ ಸುರುಳಿಗಳಿಂದ ಬಿಗಿದಿರುತ್ತಾರೆ. ಇದರ ಸುತ್ತಲೂ ಒಂದು ಜೊತೆ ಶಾಶ್ವತ ಕಾಂತಗಳು ತಿರುಗುವ ಏರ್ಪಾಡಿದೆ. ಇಂಥ ಕಾಂತಕೂಟ ಕಾಂತ ಪ್ರವಾಹದ ದಿಕ್ಕನ್ನು ಪೂರ್ತಿಯಾಗಿ ಪರಾವರ್ತನೆಗೊಳಿಸುತ್ತದೆ (ರಿವರ್ಸಸ್). ಕಾಂತಪ್ರವಾಹದ ಪ್ರಖರತೆ ಮತ್ತು ದಿಕ್ಕಿನ ಈ ಶೀಘ್ರ ಬದಲಾವಣೆಯಿಂದ ಪ್ರಾಥಮಿಕ ಮಂಡಲದಲ್ಲಿ ವಿದ್ಯುತ್ತು ಹರಿಯುತ್ತದೆ. ಈಗ ಸೂಕ್ತ ಕಾಲದಲ್ಲಿ ವಿಯೋಜಕ ಬಿಂದುಗಳ ಸಂಪರ್ಕವನ್ನು ಕಡಿದಾಗ, ವಿದ್ಯುಚ್ಛಕ್ತಿ ವಿದ್ಯುತ್ಸಂಗ್ರಾಹಕಕ್ಕೆ ಹರಿಯುತ್ತದೆ. ಕಾಂತಕ್ಷೇತ್ರದ ಕುಸಿತ, ದ್ವಿತೀಯಕ ಸುರುಳಿಗಳಲ್ಲಿ ವೋಲ್ಟೇಜಿನ ಏರಿಕೆ ಮುಂತಾದುವನ್ನು ಈ ಹಿಂದೆಯೇ ಹೇಳಿದೆ.

 ಎಂಜಿನ್ನು ಅಧಿಕ ವೇಗದಿಂದ ಓಡುವಾಗ ಕಾಂತವಿದ್ಯುತ್ ವ್ಯವಸ್ಥೆ ಉತ್ತಮವಾಗಿರುತ್ತದೆ. ವೇಗ ಕಡಿಮೆಯಿದ್ದರೆ ದುರ್ಬಲ ಕಿಡಿ ಉತ್ಪತ್ತಿಯಾಗುತ್ತದೆ. ಇದರಿಂದ ಯಾವುದೇ ಕಾರಣಕ್ಕಾಗಿ ಪ್ರವರ್ತಕ ಮೋಟಾರು (ಸ್ಟಾರ್ಟಿಂಗ್ ಮೋಟಾರ್) ವಕ್ರದಂಡವನ್ನು ಅತ್ಯಂತ ಮಂದಗತಿಯಲ್ಲಿ ಮಾತ್ರ ತಿರುಗಿಸಬಲ್ಲುದಾದರೆ ಇಂಥ ಎಂಜಿನ್ನುಗಳ ಪ್ರವರ್ತನ (ಸ್ಟಾರ್ಟಿಂಗ್) ಕಷ್ಟವಾಗುತ್ತದೆ.

 

ಚಿತ್ರ-2

 

 ಎಲೆಕ್ಟ್ರಾನಿಕ್ ಜ್ವಲನ: 1 ವಿಯೋಜಕ ಬಿಂದುಗಳು ಕೆಲವು ಅಂಪೇರುಗಳಷ್ಟು ಪ್ರೇರಿತ ವಿದ್ಯುತ್ತನ್ನು ಹರಿಯಗೊಡುವ ಮತ್ತು ಕಡಿಯುವ ಕೆಲಸವನ್ನು ಶೀಘ್ರವಾಗಿ ಮಾಡುವುದರಿಂದ ಬಿಂದುಗಳು ಸುಡುತ್ತವೆ ಹಾಗೂ ಸವೆಯುತ್ತವೆ. ಇದನ್ನು ನಿಯಮಿತವಾಗಿ ಶುದ್ಧಿಗೊಳಿಸಿ ಸರಿಯಾಗಿ ಕೂಡಿಸಬೇಕಾಗುತ್ತದೆ. 2 ವಿಯೋಜಕ ಹಾಗೂ ಪ್ರೇರಕ ಮಂಡಲಗಳೆರಡರ ವಿದ್ಯುತ್ತು ಮತ್ತು ಯಾಂತ್ರಿಕ ಪರಿಮಿತಿಗಳಿಂದಾಗಿ ಇವು ಸೆಕೆಂಡಿಗೆ 400 ಕಿಡಿಗಳಿಗಿಂತಲೂ ಅಧಿಕ ದರದಲ್ಲಿ ತೃಪ್ತಿಕರವಾಗಿ ಕಿಡಿಗಳನ್ನು ಉಂಟು ಮಾಡುವುದಿಲ್ಲ. ಇವು ಮೇಲೆ ವಿವರಿಸಿದ ವ್ಯವಸ್ಥೆಗಳ ಅವಗುಣಗಳು. ಅರೆವಾಹಕ (ಸೆಮಿಕಂಡಕ್ಟರ್) ಬಳಗದ ಘನಸ್ಥಿತಿಯ (ಸಾಲಿಡ್ ಸ್ಟೇಟ್) ಎಲೆಕ್ಟ್ರಾನಿಕ್ ಸಾಧನೆಗಳಿಂದ ಈ ತೊಂದರೆಗಳನ್ನು ನಿವಾರಿಸಬಹುದು. ಮಿಕ್ಕೆಲ್ಲ ವಿಧದಲ್ಲೂ ಸಾಂಪ್ರದಾಯಿಕವಾಗಿರುವ ಜ್ವಲನ ವ್ಯವಸ್ಥೆಯಲ್ಲಿ ವಿಯೋಜಕ ಮತ್ತು ಸುರುಳಿಗಳ ನಡುವೆ ಟ್ರಾನ್ಸಿಸ್ಟರನ್ನು ಸೇರಿಸುವುದಕ್ಕೆ ಟ್ರಾನ್ಸಿಸ್ಟರ್ ಸಹಾಯ ಪಡೆದ ಸಂಪರ್ಕಗಳು ಎಂದು ಹೆಸರು. ಈ ಕ್ರಮ ಬಿಂದುಗಳ ಸವೆತವನ್ನು ಕಡಿಮೆ ಮಾಡುತ್ತದೆ ಹಾಗೂ ಎಂಜಿನ್ನಿನ ಪ್ರವರ್ತನದಲ್ಲಿ ಸಹಾಯಕಾರಿಯಾಗುತ್ತದೆ.

(ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ